ಮನುಷ್ಯರಂತೆಯೇ ಹುಟ್ಟೂ ಸಾವೂ ಇರುವ ಹಸುವು ದೇವರಾಗಲು ಹೇಗೆ ಸಾಧ್ಯ?

ಹೀಗೊಂದು ನೇರವಾದ ಪ್ರಶ್ನೆ ಕೇಳಿದ್ದು ನನ್ನ ಒಬ್ಬರು ಆತ್ಮೀಯರು.
ದೇವರೆಂದರೆ ಹುಟ್ಟೂ ಇರದ ಸಾವೂ ಇರದ ಸರ್ವಾಂತರ್ಯಾಮಿ, ದೇವರನ್ನು ಸಾಕಾರವಾಗಿ ಕಂಡವರಿಲ್ಲ. ಈ ಜಗನ್ನಿಯಾಮಕನನ್ನು, ಹುಟ್ಟೂ ಸಾವೂ ಇರುವ ಒಂದು ಮೂಕ ಪ್ರಾಣಿಗೆ  ಹೋಲಿಸುವುದು ಎಷ್ಟು ಸರಿ? ನಾವು ಹಸುವನ್ನು ಎಷ್ಟೇ ಪ್ರೀತಿಸಿದರೂ, ಅದನ್ನು ದೇವರೆನ್ನಲು ಹೇಗೆ ಸಾಧ್ಯ?

ಅವರ ಈ ಪ್ರಶ್ನೆಗೆ ನನ್ನ ಸೀಮಿತ ಪರಿಧಿಯಲ್ಲಿ ಕಂಡ ಉತ್ತರವನ್ನು ಇಲ್ಲಿ ಕೊಡುತ್ತಿದ್ದೇನೆ. ತಿಳಿದವರು ಸಹಕರಿಸಿ.

ಮೊದಲನೆಯದಾಗಿ, ನಾವು ಹೇಳುವ ದೇವರು ಎಂಬ ಶಬ್ದ Godನ ಸೂಚಕ ಅಲ್ಲ. God ಎಂದರೆ ಪರಬ್ರಹ್ಮ ಅಥವಾ ಪರಮಾತ್ಮ. ಆದರೆ, ಯಾರೆಲ್ಲ~ಯಾವುದೆಲ್ಲ ನಮ್ಮ ಏಳಿಗೆಗೆ ಕಾರಣವಾಗುತ್ತದೋ, ಅವರೆಲ್ಲ~ಅದೆಲ್ಲವೂ ನಮಗೆ ದೇವರು.

ವಿಸ್ತಾರವಾಗಿ ಹೇಳುವುದಾದರೆ, ತಿಳಿದವರು ಕಂಡಂತೆ: ಓಂಕಾರ ವಾಚ್ಯನಾದ ಪರಬ್ರಹ್ಮ ಸಚ್ಚಿದಾನಂದಸ್ವರೂಪಿ. ನಿಶಾಂತಸಚ್ಚಿದಾನಂದ ಅದ್ವೈತಪರಮಾನಂದ ಅಪ್ರಮೇಯ ಪರಬಹ್ಮನಿಗೆ ಸ್ವಾನುಭೂತಿಯೇ ಪ್ರಮಾಣ. ಪರಬ್ರಹ್ಮವೇ ನಿತ್ಯ ಸತ್ಯ. ಅದು ಶುದ್ಧವೂ ಮುಕ್ತವೂ ಆಗಿದೆ. ಜ್ಞಾನಾನಂದವೇ ಅದರ ರೂಪವೂ ಸ್ವಭಾವವೂ. ಇದೆಲ್ಲ ಕೇವಲ ಬ್ರಹ್ಮಜ್ಞಾನಿಗೆ ಮಾತ್ರ ಅನುಭವ ವೇದ್ಯ. ಈ ಅಪ್ರತಿಮವಾದ ಪರಬ್ರಹ್ಮವು ಏಕಮೇವಾದ್ವಿತೀಯವೂ, ನಿರ್ಗುಣವೂ ಆಗಿದ್ದು ಜೀವಿಯಲ್ಲಿ ಸಾಕ್ಷೀರೂಪದಿಂದಲೂ ವ್ಯಕ್ತನಾಗಿದ್ದಾನೆ. ಪರಮಯೋಗಿಗೆ ಈ ಅಮೋಘವಾದ ಪರಬ್ರಹ್ಮವು ಧ್ಯಾನಗಮ್ಯವಾದರೆ, ಮಹಾಜ್ಞಾನಿಗೆ ಅದು ಜ್ಞಾನಗಮ್ಯ, ಭಕ್ತೋತ್ತಮನಿಗೆ ಭಕ್ತಿಗಮ್ಯ. ಸ್ವಾನುಭವವೇದ್ಯವಾದ ಈ ಪರಬ್ರಹ್ಮವು ಅವಸ್ಥಾತ್ರಯಗಳನ್ನುಮೀರಿದ್ದು, ಅತಿಶಾಂತವೂ, ಅನಾದ್ಯನಂತವೂ ಮತ್ತು ವಿಶೇಷವಾದ ಜ್ಞಾನಾನಂದರೂಪವುಳ್ಳದ್ದೂ ಆಗಿದೆ. ಆದಿಮಧ್ಯಾಂತಶೂನ್ಯವೂ, ಜೀವಿಗಳ ಅಂತಃಸ್ಸಾಕ್ಷಿಯೂ ಆಗಿರುವ ಈ ಪರಬ್ರಹ್ಮದ ಮಯಾವಿಸ್ತಾರವೇ ಜಗತ್ತಾಗಿ ಭಾಸವಾಗುತ್ತಿದೆ. ನಿರಾಕಾರವೂ ಹೌದು, ನಿರ್ವಿಕಾರವೂ ಹೌದು. ಅದು ಸಗುಣ ಹಾಗೂ ನಿರ್ಗುಣ. ಗುಣಾತೀತವೂ ಅದೇ. ಇಂತಹ ಅತಿವಿಶಿಷ್ಟವೂ, ವಿಚಿತ್ರವೂ ಆದ ಮಹಿಮಾತಿಶಯದಿಂದ ಪರಬ್ರಹ್ಮವು ದೇದೀಪ್ಯಮಾನವಾಗಿ ಬೆಳಗುತ್ತಿದೆ. ಇಂದ್ರಿಯಸಂಯಮವನ್ನು ತಪಸ್ಸಿನಿಂದ ಸಾಧಿಸಿದ ಮಹಾಯೋಗಿಗಳು ಶುದ್ಧಾಂತಃಕರಣದಿಂದ ತಮ್ಮ ನಿಜರೂಪವಾದ ಪರಬ್ರಹ್ಮವನ್ನು ಜ್ಞಾನದೃಷ್ಟಿಯಿಂದ ಸಾಕ್ಷಾತ್ಕರಿಸಿಕೊಳ್ಳುತ್ತಾರೆ. ಸಚ್ಚಿದಾನಂದಸ್ವರೂಪಿಯೂ, ಪ್ರಜ್ಞಾನಘನನೂ ಆದ ಪರಬ್ರಹ್ಮನು ತನ್ನನ್ನೇ ತಾನು ಹಾಗೂ ತನ್ನನ್ನು ತಾನೇ ಅರಿತುಕೊಂಡು ಅತಿಪ್ರಶಾಂತನೂ, ನಿಶ್ಚಲನೂ ಆಗಿದ್ದಾನೆ. ಇದೇ ಪರಮಾತ್ಮ.

ಅದೇ, ತಂದೆ~ತಾಯಿ ನಮಗೆ ದೇವರು ಯಾಕೆಂದರೆ ನಮ್ಮ ಅಸ್ಥಿತ್ವ ಅವರಿಂದಾಗಿ, ಗುರುವು ನಮಗೆ ದೇವರು ಯಾಕೆಂದರೆ ಜ್ಞಾನಪ್ರಾಪ್ತಿ ಗುರುವಿನಿಂದ. ರಾಮ~ಕೃಷ್ಣರು ದೇವರು ಯಾಕೆಂದರೆ ಹೇಗೆ ಬದುಕಬೇಕೆಂದು ಮಾದರಿಯಾಗಿ ಬದುಕಿ ತೋರಿಸಿದವರು, ಪಾಠ ಹೇಳಿದವರು ಅವರು. ಆಪತ್ತಿನಲ್ಲಿ ನೆರವಾದವರು ನಮಗೆ ದೇವರು, ರೋಗವನ್ನು ನಿವಾರಣೆ ಮಾಡಿದ ವೈದ್ಯರು ನಮಗೆ ದೇವರು. ರಕ್ಷಿಸುವ ಸೈನಿಕ~ಪೋಷಿಸುವ ರೈತರೂ ನಮಗೆ ದೇವ ಸಮಾನರು. ರಾಜನೂ ಪ್ರತ್ಯಕ್ಷವಿರುವ ದೇವರೇ, ಅನುಮಾನವಿಲ್ಲ.

ಹಾಗೆಯೇ, ಗೋವೂ ನಮಗೆ ದೇವರು.
ಯಾಕೆ?
ನಿತ್ಯ ದೇಹಕ್ಕೆ ಬೇಕಾಗುವ protein ಕೊಡುತ್ತಿರುವ ಹಾಲು ನಮಗೆ ಸಿಗುವುದು ಗೋವಿನಿಂದ.
ಬೆಸಿಯೇರಿದ ದೇಹವನ್ನು ತಂಪು ಮಾಡಲು ನಾವು ಕುಡಿಯುವ ಮೊಸರು~ಮಜ್ಜಿಗೆಗಳು ಗೋವಿನಿಂದ.
ರುಚಿಯಾದ ಬೆಣ್ಣೆ, ರೋಗ ನಿವಾರಕ ತುಪ್ಪ ಬರುವುದು ಗೋವಿನಿಂದ.
ಗೋಮೂತ್ರಕ್ಕೆ ಸಮವಾದ antiseptic ಇಲ್ಲ.
ಗೋಮಯಕ್ಕೆ ultra violet raysನ್ನು ತಡೆಯುವಲ್ಲಿ ಯಾವುದೂ ಸಾಟಿಯಲ್ಲ.
ಬರೀ ಗೋಮಯ~ಗೋಮೂತ್ರಗಳಿಂದ 41 ಬಗೆಯ ಮದ್ದನ್ನು ತಯಾರಿಸಬಹುದಾಗಿದೆ.
ಗೋಮೂತ್ರವು cancerನ್ನೂ ತಡೆಯಬಲ್ಲುದಂತೆ!

ನಾವು ಕುಡಿದಿರುವ ಹಾಲು•ಮೋಸರು•ಮಜ್ಜಿಗೆ ಎಷ್ಟು!
ಅವುಗಳನ್ನು ಸೇರಿಸಿ ಮಾಡಿ ತಿಂದ ಸಿಹಿ ಭಕ್ಷ್ಯಗಳೆಷ್ಟು!
ಸೇವಿಸಿದ ಬೆಣ್ಣೆ•ತುಪ್ಪ ಎಷ್ಟು!
ಇಷ್ಟಾಗಿಯೂ ಸಾಲದಿದ್ದರೆ,
ಬರೇ, ಹಸುವಿನ ಜೊತೆಗೆ ಕೆಲವು ದಿನ ಇದ್ದದ್ದರಿಂದಾಗಿ ಮಧುಮೇಹ•ರಕ್ತದೊತ್ತಡಗಳನ್ನು ಸಹಜ ಸ್ಥಿತಿಗೆ ತಂದವರಿದ್ದಾರೆ.
ಗೋಮೂತ್ರ ಬಳಸಿ ಹೋದ ದೃಷ್ಠಿ ಪಡೆದವರಿದ್ದಾರೆ.
ಗೋಮಯವನ್ನಷ್ಟೇ ಒಣಗಿಸಿ ಮಾರಿ ಬದುಕು ಕಂಡವರಿದ್ದಾರೆ.
ಗೋವಿಲ್ಲದೇ ಕೃಷಿಯುಂಟೇ? ಇಂದಿನ ರೋಗಯುಕ್ತ ಪೈರಿಗೆ ಗೋವಿನ ಬಗ್ಗೆ ರೈತರ, ಸರಕಾರದ, ಸಮಾಜದ ಅಲಕ್ಷ್ಯವೇ ಕಾರಣ! ಮನುಷ್ಯರಲ್ಲಿ ರೋಗ ಹೆಚ್ಚಾಗಲೂ ಅದೇ ಕಾರಣ!
ಹಾಲನ್ನು ಹೆಚ್ಚಿಸುವುದನ್ನು ಬಿಟ್ಟು, ಬರೇ ಗೋಮೂತ್ರ~ಗೋಮಯಗಳ ಸಂಸ್ಕರಣೆ ರಫ್ತು ಮಾಡಿದರೇ ಸಾಕು ಪೂರ್ತಿ ವಿಶ್ವವನ್ನೇ ಭಾರತದೆದುರು ಬಗ್ಗಿಸಬಲ್ಲೆವು.

ಋಷಿ ಪರಂಪರೆಯು ಗೋವಿಂದ,
ಕೃಷಿ ಸಂಸ್ಕೃತಿಯು ಗೋವಿಂದ,
ರೋಗನಿವಾರಣೆ ಗೋವಿಂದ,
ಭಗವದುಪಾಸೆನೆ ಗೋವಿಂದ,
ಭರತ ಸಂಸ್ಕೃತಿ ಗೋವಿಂದ,
ಭಾರತ ಪ್ರಗತಿ ಗೋವಿಂದ.

ಇಷ್ಟು ಇರುವಾಗ, ಗೋವು ದೇವರಲ್ಲವೆಂದು ಮನುಷ್ಯರಾದವರು ಹೇಗೆ ಹೇಳುವುದು?
ಹಸುವು ದೇವರೇ, ನಿಜ.
ಪರಮಾತ್ಮನ ಸೃಷ್ಟಿಯದು, ದೇವರೇ.

***

ಇದನ್ನು ನಾವು ಉಳಿಸಬೇಡವೇ? ಉಳಿಸಲೇ ಬೇಕು.
ಯಾಕೆ? ಯಾಕೆಂದರೆ, ಹಸುವನ್ನು ಉಳಿಸುವುದೆಂದರೆ ಮನುಷ್ಯ ಪ್ರಭೇದವನ್ನು ಅಳಿಯದಂತೆ ಉಳಿಸುವುದೇ ಆಗಿದೆ. ಮನುಷ್ಯರು ಇಲ್ಲದಿದ್ದರೂ ಹಸುವು ಬದುಕೀತು, ಈಗಿನಕ್ಕಿಂತಲೂ ಚೆನ್ನಾಗಿಯೇ ಬದುಕೀತು; ಆದರೆ ಗೋವಿಲ್ಲದೆ ಮನುಷ್ಯ ಬದುಕಲಾರ. ನಮ್ಮ ಸ್ವಾರ್ಥಕ್ಕಾದರೂ ಹಸುವನ್ನು ಉಳಿಸಲೇ ಬೇಕು.

***

--
ಅಕ್ಷರ ದೀಕ್ಷಿತ

Comments