ಗೋಹತ್ಯಾ ನಿಷೇಧ ಆಗಲಿ-೨

ಒಮ್ಮೆ ನನ್ನ ನಲ್ಮೆಯ ಸ್ನೇಹಿತನೊಬ್ಬ ಸೃಷ್ಠಿಯನ್ನು ದೇವರು ರಚಿಸಿದ್ದರ ವಿರಣೆಯನ್ನು ನನಗೆ ಹೇಳುತ್ತಿದ್ದ. ನಾನು ಅಮಿತ ಕುತೂಹಲದಿಂದ ಆಲಿಸುತ್ತಿದ್ದೆ. ಆತನ ವರ್ಣನೆ ಪೂರ್ತಿಯಾದನಂತರ ನಾನು ಕೇಳಿದೆ...

"ಇಡೀ ವಿಶ್ವವನ್ನು, ಎಲ್ಲ ಜೀವಿಗಳನ್ನು ದೇವರೇ ಮಾಡಿದ್ದು ಹೌದೇ?"

"ಹೌದು" ಎಂದು ದೃಢ ವಿಶ್ವಾಸದಲ್ಲಿ ನುಡಿದನಾತ.

"ಹಾಗಾದರೆ ಸಕಲ ವಿಶ್ವಕ್ಕೂ ಅವನೇ ತಂದೆಯಲ್ಲವೇ?" ಎಂದು ಕೇಳಿದೆ.

"ನಿಶ್ಚಿತವಾಗಿ" ಎಂದ.

ನಾನು ಕೇಳಿದೆ, "ಮನುಷ್ಯರನ್ನೂ ಪ್ರಾಣಿಗಳನ್ನೂ ದೇವರೇ ಸೃಷ್ಠಿಸಿದ್ದರೆ, ಮನುಷ್ಯನೊಬ್ಬ ಅಕಾರಣವಾಗಿ ಪ್ರಾಣಿಯನ್ನು ಕೊಂದರೆ, ಆಹಾರಕ್ಕೆ ಪರ್ಯಾಯವಿದ್ದಾಗಲೂ ಪ್ರಾಣಿಯನ್ನೇ ತಿಂದರೆ, ದೇವರಿಗೆ ಅದು ಇಷ್ಟ ಆದೀತಾ?"

"ಪ್ರಾಣಿಗಳು ಇರುವುದೇ ತಿನ್ನಲಿಕ್ಕಲ್ಲವೇ?" ಮುಗ್ಧವಾಗಿ ಕೇಳಿದನಾತ!

"ಅಲ್ಲ" ಎಂದೆ.
"ನಮ್ಮದೇ ಎರಡು ಮಕ್ಕಳಲ್ಲಿ ಒಬ್ಬನು ಕಾರಣವಿಲ್ಲದೇ ಇನ್ನೊಬ್ಬನಿಗೆ ಹೊಡೆದರೆ, ಕೊಂದರೆ, ನಮ್ಮ ಕರುಣೆ ಯಾವ ಮಗುವಿನ ಮೇಲೆ, ನಾವು ತಿರಸ್ಕರಿಸುವುದು ಯಾವ ಮಗುವನ್ನು? ಹಾಗೆಯೇ ಪ್ರಾಣಿವಧೆ ಖಂಡಿತಾ ದೇವರಿಗೆ ಇಷ್ಟವಾಗಲಾರದು." ಎಂದು, ಒಂದು ಪ್ರಶ್ನೆಯನ್ನು ಕೇಳಿದೆ.

"ಆಹಾರಕ್ಕಾಗಿ ಕೊಲ್ಲುವುದರ ಬದಲು, ಕರುಣೆಯಿಂದ ಒಂದು ಜೀವ ಉಳಿಸಿದರೆ, ದೇವರು ಹೆಚ್ಚು ಮೆಚ್ಚುವನಲ್ಲವೇ?"

ಆತ ಆಲೋಚನೆಗೆ ತೊಡಗಿದ. ಈಗ ನೀವು ಆಲೋಚಿಸುವ ಸರದಿ.

--
ಅಕ್ಷರ ದೀಕ್ಷಿತ

Comments